ಪದ್ಮಾವತಿ -
	ಆಕಾಶರಾಜ, ಧರಣಿದೇವಿಯರ ಮಗಳು. ತ್ರೇತಾಯುಗದಲ್ಲಿ ವೇದವತಿಯಾಗಿದ್ದು ವಿಷ್ಣುವನ್ನು ವರಿಸಲು ತಪಸ್ಸನ್ನಾಚರಿಸಿ ರಾವಣನಿಂದ ಪೀಡಿತಳಾಗಿ ಅಗ್ನಿಪ್ರವೇಶ ಮಾಡಿರುತ್ತಾಳೆ. ಸೀತಾಪಹರಣ ಕಾಲದಲ್ಲಿ, ಸೀತೆಯ ಬದಲು ಅಗ್ನಿಯಿಂದ ಕಳುಹಿಸಲ್ಪಟ್ಟು, ಸೀತೆಯ ಅಗ್ನಿಪ್ರವೇಶದ ಅನಂತರ, ರಾಮನಿಂದ 18ನೆಯ ಕಲಿಯುಗದಲ್ಲಿ ವಿಷ್ಣುವನ್ನು ಮದುವೆಯಾಗುವ ಆಶ್ವಾಸನೆ ಪಡೆಯುತ್ತಾಳೆ. ಲಕ್ಷ್ಮಿಯನ್ನರಸುತ್ತ ಭೂಲೋಕಕ್ಕೆ ಬಂದು ತಪಸ್ಸಿಗೆ ಕುಳಿತ ವಿಷ್ಣುವಿದ್ದ ಹುತ್ತಕ್ಕೆ ಹಾಲೂಡುತ್ತಿದ್ದ ತನ್ನ ಆಕಳು ಕರುಗಳು ಬ್ರಹ್ಮಶಿವರೆಂದು ಅರಿಯದೆ ಚೋಳರಾಜ ಅವನನ್ನು ನೋಯಿಸಿ ವಿಷ್ಣುವಿನಿಂದ ಶಾಪಪಡೆದು ಆಕಾಶರಾಜನಾಗಿ ಜನಿಸಿ, ರಾಜ್ಯಭಾರ ಮಾಡುತ್ತ ಮಕ್ಕಳಿಲ್ಲದೆ ಪುತ್ರಕಾಮೇಷ್ಟಿ ಯಾಗಕ್ಕಾಗಿ ಭೂಮಿಯನ್ನು ಸಮ ಮಾಡುತ್ತಿರುವಾಗ ಭೂಮಿಯೊಳಗೆ ಪೆಟ್ಟಿಗೆಯೊಂದರಲ್ಲಿ ಕಮಲದ ನಡುವೆ ಕಂಡ ಹೆಣ್ಣು ಶಿಶುವನ್ನು ಎತ್ತಿತಂದು ಪದ್ಮಾವತಿಯೆಂದು ಹೆಸರಿಟ್ಟು ಬೆಳೆಸುತ್ತಾನೆ. ಶ್ರೀನಿವಾಸನೆಂಬ ಹೆಸರಿನಿಂದ ಬೇಟೆಗಾಗಿ ಬಂದ ವಿಷ್ಣು ವಯಸ್ಸಿಗೆ ಬಂದ ಆಕೆಯನ್ನು ಮೆಚ್ಚಿ ವಿವಾಹಾತುರನಾಗುತ್ತಾನೆ. ಅವನ ಇತಿವೃತ್ತವನ್ನರಿಯದ ಪದ್ಮಾವತಿ ಅವನನ್ನು ಕಲ್ಲುಗಳಿಂದ ಹೊಡೆದು ನೋಯಿಸುತ್ತಾಳೆ. ಕೊನೆಗೆ ಶ್ರೀನಿವಾಸ ತನ್ನ ಸಾಕು ತಾಯಿ ಬಕುಲಾವತಿಯ ರಾಯಭಾರದೊಂದಿಗೆ ಕೊರವಂಜಿ ವೇಷಧಾರಿಯಾಗಿ ಹೋಗಿ ಪದ್ಮಾವತಿಯ ಮನಸ್ಸನ್ನು ಗೆಲ್ಲುತ್ತಾನೆ. ಕುಬೇರನ ಸಾಲದ ಸಹಾಯದಿಂದ ವೈಶಾಖಶುದ್ಧ ದಶಮಿಯ ಶುಭಮುಹೂರ್ತದಲ್ಲಿ ಅವರ ವಿವಾಹ ನೆರವೇರುತ್ತದೆ. ಶ್ರೀನಿವಾಸ ಪದ್ಮಾವತಿಯರು ತಿರುಪತಿಯಲ್ಲಿ ನೆಲಸುತ್ತಾರೆ.
(ವಿ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ